ಮೂಡಬಿದ್ರಿಯ ಪ್ರಸಿದ್ಧ ಎಸ್ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಸಂಸ್ಥೆಯ ಸ್ಥಾಪಕ ಹಾಗೂ ಖ್ಯಾತ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಗುಡ್ಡೆಯಂಗಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಶನ್ ಯುಗದಲ್ಲಿ ಕೈಗಾರಿಕಾ ಕ್ಷೇತ್ರವು ಕ್ಷಿಪ್ರ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. 2035ರ ವೇಳೆಗೆ ಕೇವಲ ಪದವೀಧರರಿಗಿಂತ ತಾಂತ್ರಿಕ ಕೌಶಲ್ಯ ಹೊಂದಿರುವ ವ್ಯಕ್ತಿಗಳಿಗೆ ಬೇಡಿಕೆ ಹೆಚ್ಚಲಿದೆ. ನನ್ನ ಹುಟ್ಟೂರಾದ ಗುಡ್ಡೆಯಂಗಡಿಯ ಭಾಗದ ವಿದ್ಯಾರ್ಥಿಗಳು ಈ ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ವಿಶೇಷ ಸೂಚನೆ:
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಫಲಿತಾಂಶದಲ್ಲಿ ತೇರ್ಗಡೆ ಅಥವಾ ಅನುತ್ತೀರ್ಣ ಎಂಬ ಭೇದವಿಲ್ಲದೆ ಕೌಶಲ್ಯ ಕಲಿಯುವ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗುವುದು.
ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ಬೆಳೆಸಿರುವ ಡಾ. ರಾಮಕೃಷ್ಣ ಆಚಾರ್ ಅವರು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ತಮ್ಮ ಹುಟ್ಟೂರಿನಲ್ಲಿ ಇಂತಹದೊಂದು ಕೇಂದ್ರ ಸ್ಥಾಪಿಸುತ್ತಿರುವುದು ಶ್ಲಾಘನೀಯ. ಸ್ಥಳೀಯ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು.
